ಫೋಕ್ ಹೈಸ್ಕೂಲ್ -
	ಡೆನ್ಮಾರ್ಕಿನ ಸಮಾಜ ಸುಧಾರಕ ನಿಕೊಲಾಯ್ ಫ್ರೆಡ್ರಿಕ್ ಗ್ರಂಟ್ವಿಗ್ಗನ ಶಿಕ್ಷಣ ತತ್ತ್ವವನ್ನು ಆಧಾರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ಒಂದು ಬಗೆಯ ವಯಸ್ಕರ ಶಿಕ್ಷಣ ಸಂಸ್ಥೆ. ಇದನ್ನು ಜನತಾ ವಿದ್ಯಾ ಸಂಸ್ಥೆ; ಜನತಾಶಾಲೆ ಎಂದೂ ಕರೆಯುತ್ತಾರೆ. ಈ ಸಂಸ್ಥೆಗಳಲ್ಲಿ ಪರೀಕ್ಷೆಗಳಿರುವುದಿಲ್ಲ; ಪಠ್ಯಪುಸ್ತಕಗಳ ಕಟ್ಟುಪಾಡಿಲ್ಲ; ಅನಗತ್ಯ ಕಲಿವಿನ ಹೊರೆಯಿಲ್ಲ. ಇಲ್ಲಿ ವಯಸ್ಕ ವಿದ್ಯಾರ್ಥಿಗಳು ಸರಳಬಾಳನ್ನು ನಡೆಸುತ್ತ ಉನ್ನತ ಶಿಕ್ಷಣದ ಹಾಗೂ ತಾಂತ್ರಿಕ ಪರಿಜ್ಞಾನದ ಆತುರವಿಲ್ಲದ ಉದಾತ್ತಜೀವನದ ದೃಷ್ಟಿಯನ್ನೂ ರಾಷ್ಟ್ರ್ರೀಯಭಾವನೆಯನ್ನೂ ಸಾಧಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ ಆಂತರಿಕ ಶಕ್ತಿ ಬೆಳೆಸಿ, ಐತಿಹಾಸಿಕ ಹಾಗೂ ರಾಷ್ಟ್ರೀಯ ಸಂಸ್ಕøತಿಯ ಜಾಗೃತಿ ಬೆಳೆಸುವ ಶಿಕ್ಷಣವೇ ನಿಜವಾದ ಜನತಾಶಿಕ್ಷಣವೆಂದು ಗ್ರಂಟ್‍ವಿಗ್ ಸಾರಿದ. ಈ ಮೂಲಭೂತ ಸಿದ್ಧಾಂತಗಳನ್ನು ಅನುಸರಿಸಿ ಕ್ರಿಶ್ಚಿಯನ್ ಕೋಲ್ಡ್ ಎಂಬಾತ ರ್ಯೋಡಿಂಗ್ ಎಂಬಲ್ಲಿ ಒಂದು ಶಾಲೆ ತೆರೆದ (1842). ಜರ್ಮನರ ಆಕ್ರಮಣಕ್ಕೆ ತುತ್ತಾಗಿದ್ದ ಆ ಭಾಗ ಜರ್ಮನ್ ಮತ್ತು ಡೇನಿಷ್ ಭಾಷೆ ಮತ್ತು ಸಂಸ್ಕøತಿಗಳ ತಿಕ್ಕಾಟದ ವಾದಭೂಮಿಯಾಗಿತ್ತು. ಜನತೆಯಲ್ಲಿ ಮತ್ತೆ ಡೇನಿಷ್ ಭಾಷೆ ಮತ್ತು ಸಂಸ್ಕøತಿಗಳ ಬಗ್ಗೆ ಅಭಿಮಾನ ಬೆಳೆಸಬೇಕಾಗಿತ್ತು. ಸ್ಫೂರ್ತಿದಾಯಕವಾದ ಈ ಶಾಲೆಗಳು ರಾಷ್ಟ್ರೀಯ ಭಾವನೆ ಬೆಳೆಸುವ ವಿದ್ಯಾಕೇಂದ್ರಗಳಾದವು.

	ಫೋಕ್ ಸ್ಕೂಲಿನ ಶಿಕ್ಷಣದ ಸ್ವರೂಪ : ಕೇವಲ ಆಡಂಬರದ ಮಾತಿನ ಮೂಲಕ ನೀಡುವ ನಿಸ್ಸಾರವಾದ ಕಲಿವಿಗೆ ಬದಲು ಗತಿಶೀಲವೂ ಚೈತನ್ಯಪೂರ್ಣವೂ ಆದ ಕಲಿವಿಗೆ ಮಾತ್ರ ಅಲ್ಲಿ ಸ್ಥಾನ. ಆದರೆ ಮಾತಿಗೆ ಅಲ್ಲಿ ಸ್ಥಾನವಿಲ್ಲವೆಂದಲ್ಲ. ಮಾತು ಸ್ಫೂರ್ತಿ ನೀಡಬಲ್ಲ ಆಧ್ಯಾತ್ಮದ ವಾಣಿಯಾಗಬೇಕು. ಗುರುವಿನ ಆ ವಾಣಿ ದೈವವಾಣಿಯೆಂಬ ಭಾವನೆಯಿಂದ ಕಲಿವು ಸಾಧನೆಯಾಗಬೇಕು. ಅದು ಪಠ್ಯಪುಸ್ತಕದ ವಾಚನ ಸ್ಥಳವಾಗಿರದೆ ಒಂದು ಪುಟ್ಟ ಸಮಾಜದಂತಿದ್ದು ಆಚಾರ್ಯರೇ ಹಿರಿಯಣ್ಣ, ವಿದ್ಯಾರ್ಥಿಗಳೇ ಕಿರಿಯ ಸೋದರರಂತೆ ಜೀವಿಸುತ್ತ ಪ್ರೀತಿ ವಾತ್ಸಲ್ಯಗಳ ತವರಿನ ಗೃಹದಂತಿರುತ್ತದೆ. ಅಂಥ ಸುರಸ ಸನ್ನಿವೇಶದಲ್ಲಿ ನಿಜವಾದ ಜೀವನದ ಮೂಲಕ ಉಪಯುಕ್ತ ಶಿಕ್ಷಣ ದೊರಕುತ್ತದೆ.

	ಕಾರ್ಯಕ್ರಮ : ಪ್ರತಿದಿನ ಬೆಳಗಿನ ಉಪಾಹಾರದ ಅನಂತರ ಶಿಕ್ಷಣಾರ್ಥಿಗಳು ನೆರೆಯುತ್ತಾರೆ. ಕಾರ್ಯಕ್ರಮ ಸಾಮೂಹಿಕ ಗೀತೆಯೊಂದಿಗೆ ಆರಂಭವಾಗತ್ತದೆ. ಗ್ರಂಟ್ವಿಗ್‍ನ ಭಾವಗೀತೆಗಳನ್ನು ಎಲ್ಲರೂ ಸುಶ್ರಾವ್ಯವಾಗಿ ಹಾಡುತ್ತಾರೆ. ಚರ್ಚೆ, ಉಪನ್ಯಾಸ, ಗೋಷ್ಠಿಗಳು ಜರಗುತ್ತವೆ. ಪ್ರತಿ ಉಪನ್ಯಾಸದ ಅನಂತರವೂ ಪ್ರಶ್ನೋತ್ತರಗಳು ಸ್ನೇಹಿತರ ನಡುವಿನ ಸಂಭಾಷಣೆಯಂತೆ ಮಧುರ ವಾತಾವರಣದಲ್ಲಿ ನಡೆಯುತ್ತಿದೆ. ಆಗಾಗ್ಗೆ ತಜ್ಞರನ್ನು ಆಹ್ವಾನಿಸಿ ಭಾಷಣಗಳನ್ನು ಏರ್ಪಡಿಸುವುದೂ ಉಂಟು. ಸಾಯಂಕಾಲ ಚಲನಚಿತ್ರ, ನೃತ್ಯ, ನಾಟಕ, ಸಂಗೀತ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಶಿಕ್ಷಕರೂ ಯುವಕರೂ ಇಲ್ಲಿ ಸರಸದಿಂದ ನಡೆದುಕೊಂಡರೂ ಅವರ ನಡುವೆ ಅಶಿಸ್ತಿನ ಪ್ರಶ್ನೆ ತಲೆದೋರುವುದಿಲ್ಲ. ಈಗ ವಿನೋದ, ಮುಂದಿನ ಫಳಿಗೆಯಲ್ಲಿ ರಾಷ್ಟ್ರದ ಬೃಹದ್ ಸಮಸ್ಯೆಗಳ ಬಗ್ಗೆ ಗಾಢವಾದ ಚರ್ಚೆ ಮತ್ತು ಚಿಂತನೆ (ಗ್ರಂಟ್ವಿಗ್‍ನ ಅಭಿಪ್ರಾಯದಂತೆ). ಇಲ್ಲಿ ಸಾಮೂಹಿಕ ಜೀವನ ವಿಧಾನಕ್ಕೆ ಬಹಳ ಮಹತ್ತ್ವವುಂಟು. ಇದರಿಂದ ಪರಸ್ಪರ ಅರಿವು ಮೂಡಿ ರಾಷ್ಟ್ರೀಯ ಭಾವೈಕ್ಯತೆಗೆ ದಾರಿಯಾಗುವುದು. ಆ ಮೂಲಕ ಮಾನವೀಯತೆ ಮತ್ತು ಅದಕ್ಕೆ ಸಂಬಂಧಿಸಿದ ಘನತೆಗಳನ್ನು ವೃದ್ಧಿಸಿಕೊಂಡು ಶಾಶ್ವತಮೌಲ್ಯಗಳ ಕಡೆಗೆ ಗಮನ ಕೊಡುವುದು ಶ್ರೇಯಸ್ಕರ ಎಂಬ ಅಂಶವನ್ನು ಫೋಕ್ ಹೈಸ್ಕೂಲು ಒತ್ತಿಹೇಳುತ್ತದೆ.

	ಮೂಲ ಫೋಕ್ ಹೈಸ್ಕೂಲಿನ ಮಾದರಿಯಲ್ಲಿ ಕಾರ್ಮಿಕರಿಗಾಗಿ ಶಾಲೆಗಳು ದೇಶದಲ್ಲೆಲ್ಲ ಆರಂಭವಾದುವು. ಅನಂತರ ವ್ಯವಸಾಯ ಶಾಲೆ, ತಾಂತ್ರಿಕಶಾಲೆ, ಸಹಕಾರಶಾಲೆ ಮಂತಾದ ವಿಶಿಷ್ಟರೀತಿಯ ಫೋಕ್ ಹೈಸ್ಕೂಲುಗಳು ಆರಂಭವಾದುವು. ಅವಕ್ಕೆ ಮಾರ್ಗದರ್ಶನ ನೀಡಲು ರಾಷ್ಟ್ರೀಯಮಟ್ಟದಲ್ಲಿ ಒಂದು ಕೇಂದ್ರ ಸಂಸ್ಥೆಯೂ ಆರಂಭವಾಯಿತು. ಅವು ಆ ದೇಶದಲ್ಲಿ ಜನಜೀವನ ಪುನರುಜ್ಜೀವನ ಸಾಧಿಸಿದ್ದನ್ನು ಕಂಡು ಆ ರೀತಿಯ ವಯಸ್ಕರ ಶಿಕ್ಷಣಸಂಸ್ಥೆಗಳು ಇತರ ದೇಶಗಳಲ್ಲಿಯೂ ಆರಂಭವಾದವು. ಅದಕ್ಕೆಲ್ಲ ಮಾರ್ಗದರ್ಶನ ನೀಡಲು ಎಲ್ಸ್‍ನೋರ್ ಎಂಬಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯೂ ಸ್ಥಾಪನೆಯಾಯಿತು. ಈಚೆಗೆ ಫೋಕ್ ಹೈಸ್ಕೂಲ್ ಮಾದರಿಯ ಶಾಲೆಗಳು ನಾರ್ವೆ, ಸ್ವೀಡನ್, ಫಿನ್ಲೆಂಡ್, ಜರ್ಮನಿ ಪೋಲೆಂಡ್, ಆಸ್ಟ್ರಿಯ, ಹಂಗೇರಿ, ಬಲ್ಗೇರಿಯ, ಜಪಾನ್, ಅಮೇರಿಕ, ಭಾರತ, ಮುಂತಾದೆಡೆ ಆರಂಭವಾಗಿವೆ.

	ಫೋಕ್ ಹೈಸ್ಕೂಲುಗಳ ವಿಶ್ವವಿದ್ಯಾಲಯಗಳಲ್ಲವಾದರೂ ಅವಕ್ಕಿಂತ ಜನಪ್ರಿಯವಾಗಿರುತ್ತವೆ. ಅಲ್ಲಿ ಜರಗುವ ಲಲಿತವೂ ವಿಚಾರಪೂರಿತವೂ ಆದ ಉಪನ್ಯಾಸಗಳು, ಚರ್ಚೆಗಳು ಶಿಕ್ಷಕ ವರ್ಗದೊಡನೆ ಸಹಜೀವನ, ಮೇಲುಕೀಳೆಂಬ ಭೇದವೆಲ್ಲದೆ ಒಟ್ಟಾಗಿ ಕೂಡಿ ನಡೆಸುವ ಚಟುವಟಿಕೆಗಳು ಸಾಮೂಹಿಕ ನೃತ್ಯಗಳು, ಕ್ರೀಡೆಗಳು ಇವೆಲ್ಲ ಕಲಿಕೆಯನ್ನು ಒಂದು ಹರ್ಷದಾಯಕ ಉದ್ದಿಮೆಯನ್ನಾಗಿ ಮಾಡಿವೆ. ಅಲ್ಲಿ ಶಿಕ್ಷಣ ಪಡೆದ ಯುವಕ ಯುವತಿಯರು ಜ್ಞಾನವಂತರಾಗಿ ತೇಜೋವಂತರಾಗಿ ನಾಡಿನ ಸಂಘ ಸಂಸ್ಥೆಗಳ ಮೂಲಕ ದೇಶಕ್ಕಾಗಿ ಶ್ರಮಿಸಿದ್ದಾರೆ. ಕೇವಲ ಒಂದೂವರೆ ಶತಮಾನಗಳ ಅವಧಿಯಲ್ಲಿ ದಾಸ್ಯ, ದಾರಿದ್ರ್ಯ, ಅನಕ್ಷರತೆ ಅಜ್ಞಾನಗಳಲ್ಲಿ ಹೊರಳುತ್ತಿದ್ದ ಡೆನ್ಮಾರ್ಕನ್ನು ಮೇಲೆತ್ತಿ ಒಂದು ವಿನೂತನ ರಾಷ್ಟ್ರವನ್ನಾಗಿ ರಚಿಸಿದ್ದಾರೆ. ಆಧುನಿಕ ಡೆನ್ಮಾರ್ಕನ್ನು ಕಟ್ಟಿರುವವರು ಎಚ್ಚೆತ್ತ ರೈತರೇ ವಿನಾ ಆಧುನಿಕ ಯಂತ್ರಗಳಲ್ಲ; ಜನ ಹೈನುಗಾರಿಕೆ, ಬೇಸಾಯ, ಸಹಕಾರಿ ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ತೊಡಗಿ ದುಡಿಯುತ್ತಿದ್ದಾರೆ.

	ಫೋಕ್ ಹೈಸ್ಕೂಲುಗಳ ಮಾದರಿಯಲ್ಲಿ ವಿದ್ಯಾಪೀಠಗಳೆಂಬ ಹೆಸರಿನಲ್ಲಿ ಹನ್ನೆರಡಕ್ಕೂ ಹೆಚ್ಚು ಜನತಾ ಶಾಲೆಗಳನ್ನು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ತೆರೆದಿದೆ. ಗ್ರಾಮಾಂತರ ವಿದ್ಯೆ ಮತ್ತು ಪ್ರಗತಿಗೆ ನೆರವಾಗುವ ವಿದ್ಯಾಪೀಠಗಳ ಮಹತ್ತ್ವವನ್ನು ಕಂಡುಕೊಂಡ ಇಲ್ಲಿನ ರಾಜ್ಯಸರ್ಕಾರ ಅದಕ್ಕೆ ಪ್ರೋತ್ಸಾಹನೀಡುತ್ತಿದೆ.

	ಕರ್ನಾಟಕದ ವಿದ್ಯಾಪೀಠಗಳು ಡೆನ್ಮಾರ್ಕಿನ ಫೋಕ್ ಹೈಸ್ಕೂಲುಗಳ ಅಂತಃಶಕ್ತಿಯನ್ನು ಪ್ರಾಚೀನ ಆಶ್ರಮಗಳ ಸರಳತೆಯನ್ನು ಮೈಗೂಡಿಸಿಕೊಂಡಿರುವ ವಿಶಿಷ್ಟ ರೀತಿಯ ವಿದ್ಯಾಸಂಸ್ಥೆಗಳು. ಅವು ಜನಸಾಮಾನ್ಯರ ವಿದ್ಯೆ ಮತ್ತು ಸ್ಫೂರ್ತಿಯ ಕೇಂದ್ರಗಳಾಗಿ ಅನೇಕ ಜನಪ್ರಿಯ ಚಟುವಟಿಕೆಗಳಿಗೆ ಹೆಸರಾಗಿವೆ. ರಾಷ್ಟ್ರದ ಬಹುಮುಖ ಸಮಸ್ಯೆಗಳಿಗೆ ಜನತಾಮಟ್ಟದಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಅವು ಶ್ರಮಿಸುತ್ತಿವೆ. 	
(ಎಸ್.ಆರ್.ಎಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ